ರವುತ್‍ರಾಯ್, ಸಚ್ಚಿದಾನಂದ
1916-. 1986ನೆಯ ಸಾಲಿನ ಜ್ಞಾನಪೀಠ ಪ್ರಶಸ್ತಿಗಳಿಸಿದ ಒರಿಯ ಲೇಖಕ, ಕವಿ. 13 ಮೇ 1916ರಂದು ಒರಿಸ್ಸ ರಾಜ್ಯದ ಪುರಿ ಜಿಲ್ಲೆಯ ಗುರುಗಂಜ್‍ನಲ್ಲಿ ಹುಟ್ಟಿದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ತಾವು ಓದುತ್ತಿದ್ದ ಶಾಲೆಯ ಕಟ್ಟಡದ ಮೇಲೆ ಭಾರತೀಯ ಧ್ವಜವನ್ನು ಹಾರಿಸಿದ್ದರಿಂದ ತಮ್ಮ ವ್ಯಾಸಂಗವನ್ನೇ ನಿಲ್ಲಿಸಬೇಕಾಯಿತು. ಆದರೆ ಮುಂದೆ ಕಲ್ಕತ್ತೆಯಲ್ಲಿ ಇಂಟರ್ ಓದುತ್ತಿದ್ದಾಗ ಮತ್ತೆ ಸ್ವಾತಂತ್ರ್ಯ ಚಳವಳಿ ಕೈಬೀಸಿ ಕರೆಯಿತು. ಆ ಬಾರಿ ಸೆರೆಮನೆಯ ವಾಸ ಲಭಿಸಿತು. ಮುಂದೆ ಇವರು ಒರಿಸ್ಸಕ್ಕೆ ಬಂದು ಬಹಳ ಕಷ್ಟದಿಂದ ಕಾಲೇಜು ಪ್ರವೇಶ ದೊರಕಿಸಿಕೊಂಡರು. ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಕವನಗಳನ್ನು ರಚಿಸತೊಡಗಿದರು. ಇವರ ಕವನ ಸಂಕಲನ 'ರಕ್ತಶಿಖಾ ಪ್ರಕಟವಾಯಿತು. ಆದರೆ ಬ್ರಿಟಿಷ್ ಸರ್ಕಾರ ಇದನ್ನು ಬಹಿಷ್ಕರಿಸಿ ಇವರನ್ನು ಪುನಃ ಸೆರೆಮನೆಗೆ ದೂಡಿತು. ಇದಾವುದರಿಂದಲೂ ಧೃತಿಗೆಡದ ಇವರು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮತ್ತೊಂದು ಕೃತಿಯನ್ನು 'ಛಾತ್ರ ಎಂಬ ಹೆಸರಿನಿಂದ ಪ್ರಕಟಿಸಿದರು. ಈ ಬಾರಿ ಕೆರಳಿದ ಬ್ರಿಟಿಷ್ ಸರ್ಕಾರ ಇವರಿಗೆ ದಂಡ ವಿಧಿಸಿತು. ದಂಡದ ಹಣಕೊಟ್ಟು ಬಿಡುಗಡೆ ಹೊಂದಲು ಇವರ ಬಳಿ ಹಣವಿರಲಿಲ್ಲ. ಕೊನೆಗೆ ನಗರದ ವಕೀಲರೊಬ್ಬರು ಇವರ ಪರವಾಗಿ ದಂಡ ತೆತ್ತು ಇವರು ಬಿ.ಎ. ಪದವಿಯನ್ನು ಗಳಿಸಲು ನೆರವಾದರು. ಮತ್ತೆ ಕಲ್ಕತ್ತ ಇವರನ್ನು ಕೈಬೀಸಿ ಕರೆಯಿತು. ಅಲ್ಲಿಯ ಹತ್ತಿ ಗಿರಣಿಯೊಂದರಲ್ಲಿ ಉದ್ಯೋಗ ದೊರಕಿಸಿಕೊಂಡರು. ಅಲ್ಲಿ ಸುಮಾರು ಎರಡು ದಶಕಗಳಷ್ಟು ಸುದೀರ್ಘ ಸೇವೆ ಸಲ್ಲಿಸಿ ಮರಳಿ ಒರಿಸ್ಸ ರಾಜ್ಯಕ್ಕೆ ಹಿಂದಿರುಗಿದರು.

	ಇವರು ಬಂಗಾಲಿ ಮತ್ತು ಇಂಗ್ಲಿಷ್ ಹಾಗೂ ಒರಿಯ ಭಾಷೆಗಳಲ್ಲಿ ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಕಾದಂಬರಿ, ಕಥೆ, ವಿಮರ್ಶೆ ಹಾಗೂ ಕಾವ್ಯಸಂಕಲನಗಳು ಸೇರಿವೆ. ಪ್ರಧಾನವಾಗಿ ಇವರು ಕವಿಗಳು. ಪಾಂಡುಲಿಪಿ, ಪಾಥೇಯ, ಪಲ್ಲಿಶ್ರೀ, ಕವಿತಾ-ಇವೇ ಮೊದಲಾದವು ಇವರ ಕವನ ಸಂಕಲನಗಳು. ಪಾಂಡುಲಿಪಿ ನವ್ಯಕಾವ್ಯದ ಮಾದರಿಯದು. ಪಾಥೇಯ ಇವರ ಮೊಟ್ಟಮೊದಲ ಕವಿತಾ ಸಂಕಲನ. ಹಳ್ಳಿಯ ಸರಳ ಜೀವನವನ್ನು 'ಪಲ್ಲಿಶ್ರೀ ಅಭಿವ್ಯಕ್ತಗೊಳಿಸಿದರೆ ಕವಿತಾ 1962, 1969, 1971 ಸಂಕಲನ ಗ್ರಂಥಗಳು ಮನುಷ್ಯನ ಬದುಕನ್ನು ಕುರಿತಂತೆ, ಆತನ ಸ್ವಭಾವದ ವಿವಿಧ ಮುಖಗಳನ್ನು ಕುರಿತಂತೆ ಸುಂದರವಾದ ಚಿತ್ರಣಗಳನ್ನು ನೀಡುತ್ತವೆ.

	ಇವರು ಸುಮಾರು ಐದು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲ ಕೃತಿಗಳಲ್ಲೂ ಹಳ್ಳಿಗಾಡಿನ ಜನರ ಜೀವನ ಓದುಗರ ಮನಮಿಡಿಯುವಂತೆ ಚಿತ್ರಿತವಾಗಿದೆ. ಹೊಸತನವನ್ನು ಸಾಹಿತ್ಯದಲ್ಲಿ ಮೂಡಿಸಿದಂಥ ಇವರ ಮತ್ತೊಂದು ಕೃತಿ `ಚಿತ್ರಗ್ರೀವ ಕಾದಂಬರಿ.

	ಇವರ ಸಾಹಿತ್ಯಕ ಪ್ರವೃತ್ತಿ ಇಷ್ಟಕ್ಕೇ ಸೀಮಿತವಾಗಿಲ್ಲ. ಸಾಹಿತ್ಯ-ವಿಮರ್ಶೆಗಳನ್ನು ಒಳಗೊಂಡಂತೆ ಹಲವಾರು ಪುಸ್ತಕಗಳನ್ನು ಇವರು ಪ್ರಕಟಿಸಿದ್ದಾರೆ. `ದಿಗಂತ ಎಂಬ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸಮಗ್ರ ಕೃತಿಗಳು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿವೆ.

	ರಾವುತ್‍ರಾಯ್ ಅವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. 1962ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿತು. 1963ರಲ್ಲಿ ಇವರ `ಕವಿತಾ 62 ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಡೆಮಿ ಪ್ರಶಸ್ತಿ ದೊರಕಿತು. ಮುಂದೆ 1965ರಲ್ಲಿ `ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಸಿಕ್ಕಿತು. ಆಂಧ್ರ ಮತ್ತು ಬೆರಹಮ್‍ಪುರ ವಿಶ್ವವಿದ್ಯಾಲಯಗಳು ಕ್ರಮವಾಗಿ 1977 ಮತ್ತು 1978ರಲ್ಲಿ ಗೌರವ ಡಾಕ್ಟೊರೇಟ್ ಪದವಿಗಳನ್ನು ನೀಡಿದವು. ಇವರು 1968ರಲ್ಲಿ ಕಲ್ಕತ್ತೆಯಲ್ಲಿ ನಡೆದ ಅಖಿಲ ಭಾರತ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು.									
(ಕೆ.ಎನ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ